Welcome, Guest   [ Register | Sign In | Take a tour | Adult Filter: On ]
ವರ್ಗಗಳು
ನನ್ನ ಬರಹಗಳು (32)  RSS feed

ಮತ್ತೆ ಅದೇ ತಪ್ಪು ಬೇಡ (1)  RSS feed
ಮತ್ತೆ ಅದೇ ತಪ್ಪು ಬೇಡ ಮತ್ತೆ ಹಾಳು ರಾಜಕೀಯದ ಬಗ್ಗೆಯೇ ಬರೆಯಲೇಬೇಕಾದ ಸಂದರ್ಭವೊದಗಿದೆ. ಕನ್ನಡ ನಾಡಿನ ಜನರ ಬಾಯಲ್ಲಿ ಬೇರೆಯೇನಾದರೂ ಏನಿದೆ ಮಾತನಾಡಲು..... ರಾಜ್ಯದ ವಿಧಾನಸಭೆಯನ್ನು ವಿಸರ್ಜಿಸುವ ಕಾಲ ಸನ್ನಿಹಿತವಾಗಿದೆ. ಅಧಿಕಾರದ ಸುಖ ಬಿಡಲೊಲ್ಲೆ ಅನ್ನುತ್ತಾ ಮತ್ತೆ ಕಾಂಗ್ರೆಸ್‌ ಬಾಗಿಲನ್ನು ತಟ್ಟಲು ಹೋದ ಮಣ್ಣಿನ ಮಗನಿಗೆ ಕಾಂಗ್ರೆಸ್ ಹೈಕಮಾಂಡ್ ಬಾಗಿಲು ಮುಚ್ಚಿದ್ದನ್ನು ಕೇಳಿ ಜನ ನಗುತ್ತಿದ್ದಾರೆ. ಹೊಸ ಪಕ್ಷ ಸ್ಥಾಪಿಸುತ್ತೇನೆ ಎನ್ನುವ ಹೇಳಿಕೆ ನೀಡಿ ಮತ್ತೆ ಮಾರನೇ ದಿನವೇ ಇರುವ ಪಕ್ಷಕ್ಕೇ ಹೊಸ ರೂಪ ನೀಡಲು ಯೋಚಿಸುತ್ತಿದ್ದೇವೆ ಎಂದ ಕುಮಾರಸ್ವಾಮಿ ಮತ್ತೆ ತಮ್ಮ ಗೋಸುಂಬೆತನವನ್ನು ಪ್ರದರ್ಶಿಸಿದ್ದಾರೆ. ಪಕ್ಷದ ನಿಲುವಿನಿಂದ ಬೇಸತ್ತಿರುವ ಸಾಕಷ್ಟು ಜೆಡಿಎಸ್ ಶಾಸಕರು ಪಕ್ಷಾಂತರಕ್ಕೆ ಸಿದ್ಧರಾಗುತ್ತಿದ್ದಾರೆ. ದೇವೇಗೌಡರ ಮೋಸಕ್ಕೆ ಬಲಿಪಶುವಾಗಿ ಎರಡನೇ ಬಾರಿಗೂ ಕೈಸುಟ್ಟುಕೊಂಡ ಬಿಜೆಪಿಯಲ್ಲಿ ಒಗ್ಗಟ್ಟು ಕಂಡು ಬರುತ್ತಿದ್ದರೂ ಭಿನ್ನಮತವನ್ನು ಅಲ್ಲಗಳೆಯುವಂತಿಲ್ಲ. ಕಾಂಗ್ರೆಸ್ ತನ್ನ ಎಂದಿನ ಶೈಲಿಯಲ್ಲೇ ಹೈಕಮಾಂಡ್ ನಿರ್ಧಾರಕ್ಕೆ ಅಸ್ತು ಎಂದು ತಟಸ್ಥವಾಗಿದೆ. ಜನರಿಗೆ ಮತ್ತೊಮ್ಮೆ ಬಲಾತ್ಕಾರದ ಚುನಾವಣೆಯನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ. ಹೀಗಿದ್ದಾಗ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಕುದುರೆ ಯಾವುದು ಎನ್ನುವುದು ಈಗಿನ ಪ್ರಶ್ನೆ. ಎರಡು ಬಾರಿಯೂ ಅದೃಷ್ಟ ಕಳೆದುಕೊಂಡ ಬಿಜೆಪಿ ಮೂರನೇ ಬಾರಿ ತನ್ನ ಸ್ವಂತ ಬಲದಲ್ಲಿ ಅಧಿಕಾರ ನಡೆಸುವುದೇ ಅಥವಾ ಇಬ್ಬರ ನಡುವೆ ಮೂರನೇ ಲಾಭ ಎಂಬತ್ತೆ ಬೇಸತ್ತ ಜನ ಕಾಂಗ್ರೆಸ್ ನತ್ತ ಮುಖ ಮಾಡುತ್ತಾರೆಯೇ ಎಂಬುದು ಯಕ್ಷಪ್ರಶ್ನೆ. ಒಂದಂತೂ ನಿಜ, ಕಪಟ ಜನರ ಕೈಯಲ್ಲಿರುವ ಜೆಡಿಎಸ್ ಮಾತ್ರ ಈಗಿರುವ ಸ್ಥಾನಗಳನ್ನು ಉಳಿಸಿಕೊಂಡರೆ ಅದೇ ಮಹಾನ್ ಸಾಧನೆ. ದೇವೇಗೌಡರ ಆಟವನ್ನು ನೋಡಿ ಬೇಸತ್ತಿರುವ ಜನ ಅವರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆಂಬುದು ಸತ್ಯ ಸಂಗತಿ. ಮತ್ತೊಮ್ಮೆ ಅತಂತ್ರ ಸ್ಥಿತಿಯನ್ನು ಉಂಟುಮಾಡದಿರುವ ಮಹತ್ವದ ಜವಾಬ್ದಾರಿ ಕನ್ನಡ ನಾಡಿನ ಜನರ ಮೇಲಿದೆ. ಜನ ಇಂತಹ ಮೂರ್ಖ ಕೆಲಸವನ್ನು ಇನ್ನೊಮ್ಮೆ ಖಂಡಿತ ಮಾಡಬಾರದು. ಸದ್ಯದ ಪರಿಸ್ಥಿತಿಯಲ್ಲಿ ಇಂಗುತಿಂದ ಮಂಗನಂತಾಗಿರುವ ಬಿಜೆಪಿಯ ಬಗ್ಗೆ ಜನರಲ್ಲಿ ಅನುಕಂಪ ಮೂಡಿರುವದಂತೂ ಸತ್ಯ. ಹಣಕಾಸು ಸಚಿವರಾಗಿ ಉತ್ತಮ ಬಜೆಟ್ ನೀಡಿದ ಯಡಿಯೂರಪ್ಪನವರಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಲು ಅವಕಾಶವೇ ಸಿಗದಿದ್ದಕ್ಕೆ ಬೇಸರಗೊಂಡಿರುವ ಜನ ಮತ್ತೆ ಬಿಜೆಪಿಗೆ ಓಟು ಹಾಕಿದಲ್ಲಿ ಸಂಶಯಪಡಬೇಕಾಗಿಲ್ಲ. ಆದರೆ ಅಧಿಕಾರ ಸಿಕ್ಕಿದ ನಂತರ ಆಂತರಿಕ ಭಿನ್ನಮತದಂತಹ ಸಮಸ್ಯೆ ಬಿಜೆಪಿಯಲ್ಲಿ ಸಾಮಾನ್ಯವಾಗಿದೆ. ಇದನ್ನು ತಗ್ಗಿಸುವಲ್ಲಿ ಹಿರಿಯರು ಹೇಗೆ ಕಸರತ್ತು ನಡೆಸುತ್ತಾರೆ ಎಂಬುದೇ ಪ್ರಮುಖ ವಿಷಯ. ಸದಾ ಹೈಕಮಾಂಡಿನ ನಿರ್ಧಾರಕ್ಕೆ ತಲೆಬಾಗಿ ಭಿನ್ನಮತಕ್ಕೆ ಕಡಿಮೆ ಅವಕಾಶವಿರುವ ಕಾಂಗ್ರೆಸ್ ಈಗಿನ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯಲು ಯತ್ನಿಸುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅದೇ ಹಳೆಯ ಮುಖಗಳಾದ ಧರ್ಮಸಿಂಗ್ ಹಾಗು ಖರ್ಗೆಯವರ ನಾಯಕತ್ವಕ್ಕೆ ಜನ ಬೆಂಬಲ ಸೂಚಿಸುತ್ತಾರೆಯೇ ಎನ್ನುವುದು ಪ್ರಶ್ನಾರ್ಥಕ ವಿಷಯ. ಜೆಡಿಎಸ್ ಯಾವ ರೀತಿಯಲ್ಲಿ ಚುನಾವಣೆ ಎದುರಿಸುತ್ತದೆ ಎನ್ನುವದು ಕುತೂಹಲದ ವಿಷಯ. ಆದರೆ ಜನರು ಮಾತ್ರ ತೀರಾ ಎಚ್ಚರಿಕೆಯಿಂದ ಮತ ಚಲಾಯಿಸಬೇಕು. ನಾವು ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇವೆ. ನಮ್ಮ ಚುನಾಯಿತರು ಯಾವ ಮಟ್ಟದಲ್ಲಿ ಹೇಸಿಗೆ ರಾಜಕಾರಣವನ್ನು ಮಾಡುತ್ತಾರೆ ಎಂದು ನೋಡಿದ್ದೇವೆ. ಅತಂತ್ರ ವಿಧಾನಸಭೆಯಿಂದಾಗುವ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಮರುಗಿದ್ದೇವೆ. ಇನ್ನಾದರು ನಾವು ಎಚ್ಚೆತ್ತುಕೊಳ್ಳಲೇಬೇಕು. ದಿಟ್ಟ ನಿರ್ಧಾರ ಕೈಗೊಳ್ಳುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ.