ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ವಿಷಾದದ ಸಂಗತಿ. ಪ್ರತಿಮೆಯ ಸ್ಥಾಪನೆಯ ಸ್ಥಳ, ಮತ್ತಿತ್ತರ ವಿಷಯಗಳು ಏನೇ ಇರಲಿ ಕೇವಲ ಪ್ರತಿಮೆಯ ಸ್ಥಾಪನೆ ವಿಷಯದಲ್ಲಿ ಹುಳುಕನ್ನು ಹುಡುಕುವುದನ್ನು ಸಂಘಟನೆಗಳು ಬಿಡಬೇಕು. ಏಕೆಂದರೆ ಇನ್ನಿತರ ಹಲವಾರು ವಿಷಯಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆ ಇದೆ. ಮೂಲಭೂತ ವಿಷಯಗಳಲ್ಲೇ ಕನ್ನಡಿಗರು ಕನ್ನಡವನ್ನೇ ಮರೆಯುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡತನ ಮಾಯವಾಗುತ್ತಿದೆ. ಇವುಗಳು ಬಗ್ಗೆ ಜಾಗೃತಿ ಮೂಡಿಸಬೇಕಾದದ್ದು ಈಗಿನ ಪ್ರಮುಖ ಕಾರ್ಯವಾಗಿದೆ.
ಇದಕ್ಕಿಂತ ಮೊದಲು ಕನ್ನಡವನ್ನು ಉಳಿಸಿ, ಬೆಳೆಸಲು ಮಾಡಬೇಕಾದ ಕಾರ್ಯಗಳು ಸಾಕಷ್ಟಿವೆ. ಮೂಲಭೂತವಾಗಿ ಕನ್ನಡವನ್ನು ಉಳಿಸಿ ಬೆಳೆಸುವ ಪ್ರಯತ್ನಗಳತ್ತ ಸಂಘಟನೆಗಳು ಗಮನಹರಿಸದೇ ಇಂತಹ ವಿಷಯಗಳಲ್ಲಿ ಮೊಂಡಾಟ ಮಾಡುತ್ತಿರುವುದು ವಿಷಾದನೀಯ.
1. ಮೊದಲು ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಉಗ್ರ ಹೋರಾಟ ನಡೆಸುವುದು.
2. ಈ ಮೇಲಿನ ಕ್ರಮದಿಂದ ಕನ್ನಡಗರಿಗೆ ನ್ಯಾಯಬದ್ಧವಾಗಿ ಉದ್ಯೋಗ ದೊರೆಯುವುದಲ್ಲದೇ, ವಲಸಿಗರಿಂದ ತತ್ತರಿಸಿರುವ ಬೆಂಗಳೂರಿಗೆ ಮುಕ್ತಿ ದೊರಕಿಸುತ್ತದೆ.
3. ರೇಲ್ವೆ ಹಾಗೂ ಇತರ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸಂಪೂರ್ಣವಾಗಿ ತಪ್ಪಿಸುವ ಬಗ್ಗೆ ನಿರಂತರ ಹೋರಾಟ.
4. ಕನ್ನಡದಲ್ಲೇ ಫಲಕಗಳು, ಜಾಹೀರಾತು ಫಲಕಗಳು ಇರುವಂತೆ ನೋಡಿಕೊಳ್ಳುವುದು.
5. ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಕನ್ನಡಕ್ಕೇ ಹೆಚ್ಚು ಪ್ರಾಧಾನ್ಯತೆ ದೊರೆಯುವಂತೆ ಕಟ್ಟೆಚ್ಚರ ವಹಿಸುವುದು. ಈ ಬಗ್ಗೆ ಆಗಾಗ ಕೂಗು ಹಾಕಿ ಸುಮ್ಮನಾಗುವ ಸಂಘಟನೆಗಳು ಪ್ರಬಲವಾಗಿ ಹೋರಾಟ ಏಕೆ ಮಾಡುತ್ತಿಲ್ಲ?
6. ಗಡಿ ಭಾಗಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಬಗ್ಗೆ ನಿರಂತರ ಕಾರ್ಯಗಳು.
7. ಈಗಾಗಲೇ ಮುಖ್ಯಮಂತ್ರಿ ಚಂದ್ರು ಅವರ ಸಮರ್ಥ ಅಧ್ಯಕ್ಷತೆಯಲ್ಲಿ ಸಕ್ರಿಯವಾಗಿರುವ ಕನ್ನಡ ಅಭಿವೃದ್ದಿ ಪ್ರಾಧಿಕಾರದೊಂದಿಗೆ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಗಳಲ್ಲಿ ಕೈಜೋಡಿಸುವುದು. ಇದು ಪ್ರಾಧಿಕಾರ ಕೈಗೊಳ್ಳುವ ಕ್ರಮಕ್ಕೆ ಇನ್ನಷ್ಟು ಬಲ ಮೂಡಿಸುತ್ತದೆ.
ಇಂತಹ ಇತರ ಹತ್ತು ಹಲವಾರು ಪ್ರಮುಖಕಾರ್ಯಗಳು ಮೂಲೆಗುಂಪಾಗಿರುವಾಗ, ಕೇವಲ ಪ್ರತಿಮೆ ಸ್ಥಾಪನೆಯ ವಿಚಾರದಲ್ಲಿ ಮೊಂಡಾಟ ಮಾಡುತ್ತಿರುವ ಕನ್ನಡ ಸಂಘಟನೆಗಳಿಗೆ ಶೋಭೆಯಲ್ಲ. ಹೆಚ್ಚಿನದಾಗಿ ನಾಡಿನ ಹಿರಿಯ ಸಾಹಿತಿಗಳು, ಮುಖಂಡರುಗಳು ಈ ಪ್ರಯತ್ನಕ್ಕೆ ಬೆಂಬಲ ನೀಡಿರುವಾಗ ಕನ್ನಡ ಸಂಘಟನೆಗಳು ಈ ವಿಷಯವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವುದು ಒಳ್ಳೆಯ ಲಕ್ಷಣವಲ್ಲ.
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು