ಈ ಬಾರಿಯ ರೈಲ್ವೇ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್ ಸಿಗದಿದ್ದರೂ, ಲಾಲೂ ಪ್ರಸಾದ್ ಅವರು ಅಧಿಕಾರದಲ್ಲಿದ್ದಾಗ ಮಾಡಿದ ಅನ್ಯಾಯವೇನೂ ಮಾಡಿಲ್ಲ. ಬಹುಶಃ ಮುನಿಯಪ್ಪನವರ ಕೊಂಚ ಪ್ರಯತ್ನದಿಂದ ಆಶಾಕಿರಣವಂತೂ ಮೂಡಿದೆ.
ಹಲವು ಘೋಷಣೆಗಳನ್ನು ಹಿಂದಿನ ಬಜೆಟ್‌ನಲ್ಲೇ ಮಾಡಲಾಗಿರುವುದರಿಂದ ಹೊಸದಾಗಿ ಘೋಷಣೆಯಾಗಿರುವವಲ್ಲಿ 4 ಹೊಸ ರೈಲುಗಳು ಇದೀಗ ಸೇರ್ಪಡೆಯಾಗಿದೆ.
ಉತ್ತರದ ಕಡೆ ಸಂಚರಿಸುವ ರೈಲುಗಳನ್ನು ಬದಿಗಿಟ್ಟುಬಿಡೋಣ. ಏಕೆಂದರೆ ಉತ್ತರದ ಕಡೆಗೆ ಸಂಚರಿಸುವ ರೈಲುಗಳೆಲ್ಲಾ ಬೆಂಗಳೂರಿನಿಂದ ಸಂಚರಿಸುವಂತಹವು ಮತ್ತು ಅದರ ಉಪಯೋಗ ಉತ್ತರಭಾರತೀಯರಿಗೆ ಮಾತ್ರ ಎಂಬುದು ನನ್ನ ಅನಿಸಿಕೆ. ಈಗಾಗಲೇ ಉತ್ತರಭಾರತೀಯರಿಂದ ತುಂಬಿ ತುಳುಕುತ್ತಿರುವ ಬೆಂಗಳೂರಿಗೆ ಮತ್ತೊಂದಿಷ್ಟು ಆಘಾತ ತರಿಸುವಂತಹ ರೈಲುಗಳಿವು.
ಇನ್ನುಳಿದಂತೆ ಬೆಂಗಳೂರು- ಹುಬ್ಬಳ್ಳಿ- ಸೊಲ್ಲಾಪುರ ಸೂಪರ್‌ಫಾಸ್ಟ್ ರೈಲು ನಮ್ಮ ಉತ್ತರ ಕರ್ನಾಟಕ ಭಾಂದವರಿಗೆ ಹರ್ಷ ಮೂಡಿಸಬಹುದು. ಜೊತೆಗೆ ಬಹು ನಿರೀಕ್ಷಿತ ಬೆಂಗಳೂರು- ಶಿವಮೊಗ್ಗ ಇಂಟರ್‌ಸಿಟಿ ರೈಲನ್ನು ಮಲೆನಾಡಿನ ಜನರು ನಿರೀಕ್ಷಿಸುತ್ತಿದ್ದರು ಮತ್ತು ಅದು ದೊರೆತಿರುವುದು ಸಂತಸದ ವಿಷಯ. ವಾರಕ್ಕೆ ಮೂರು ಬಾರಿ ಸಂಚರಿಸುವ ಮುಂಬೈ-ಕಾರವಾರ ರೈಲು ಮಹಾರಾಷ್ಟ್ರ ಜನರಿಗಷ್ಟೇ ಮೀಸಲು ಎಂದರೆ ತಪ್ಪೇನಿಲ್ಲ. ಅದನ್ನು ಮಂಗಳೂರಿನವರೆಗೆ ವಿಸ್ತರಿಸಿದ್ದರೆ ಕರಾವಳಿ ಜನರಿಗೆ ಅನುಕೂಲವಾಗುತ್ತಿತ್ತು.
ಇನ್ನುಳಿದಂತೆ ಮೈಸೂರು-ಯಶವಂತಪುರ ರೈಲು ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ನಾಗರಿಕರಿಗೆ ಅನುಕೂಲಕರ. ಬೆಂಗಳೂರು-ಹುಬ್ಬಳ್ಳಿ ಇಂಟರ್ಸಿಟಿ ರೈಲನ್ನು ಧಾರವಾಡಕ್ಕೆ ವಿಸ್ತರಿಸಿರುವುದು ಸಹ ಧಾರವಾಡದ ನಾಗರಿಕರಿಗೆ ಸಂತಸ ನೀಡಬಹುದು. ನಾಲ್ಕು ರೈಲುಗಳನ್ನು ವಿಸ್ತರಣೆ ಮಾಡಲಾಗಿದ್ದು ಅದರಲ್ಲಿ ಎರಡು ರೈಲುಗಳ ವಿಸ್ತರಣೆ ಕೇರಳ ಮತ್ತು ತಮಿಳಿಗರಿಗೆ ಅನುಕೂಲಕರವಾದಂತಿದೆ. ಬಹು ಬೇಡಿಕೆಯ ಬೆಂಗಳೂರು- ಮಂಗಳೂರು ರೈಲನ್ನು ಕಣ್ಣೂರಿನವರಿಗೆ ವಿಸ್ತರಿಸಿರುವುದರಿಂದ ಕೇರಳದ ಕಣ್ಣೂರು ಭಾಗದವರಿಗಷ್ಟೇ ಅನುಕೂಲ. ಆದರೆ ಬೆಂಗಳೂರು ಮತ್ತು ಮಂಗಳೂರು ನಡುವೆ ಶೀಘ್ರದಲ್ಲಿಯೇ ಹಗಲು ರೈಲು ಸಂಚಾರ ಮಾಡುವ ಭರವಸೆಯನ್ನು ಮುನಿಯಪ್ಪ ನೀಡಿರುವುದರಿಂದ ಕೊಂಚ ಸಮಾಧಾನ ಪಟ್ಟುಕೊಳ್ಳಬಹುದು. ಹಾಗೆಯೇ ಮಂಗಳೂರು- ಚೆನ್ನೈ ರೈಲು ಬಹುಪಾಲು ಕೇರಳದ ಮೂಲಕ ಸಂಚರಿಸುವುದರಿಂದ ಕೇರಳದವರಿಗೆ ಅನುಕೂಲವಾಗಿದೆ, ಈಗ ಅದನ್ನು ಪುದುಚೇರಿಯವರಿಗೆ ವಿಸ್ತರಿಸಿದ್ದು ತಮಿಳಿಗರಿಗೆ ಅನುಕೂಲವಾಗಬಹುದು.
ಚೆನ್ನೈ ಮತ್ತು ಮಂಗಳೂರು ನಡುವೆ ವಾರಕ್ಕೆ ಮೂರು ಬಾರಿ ಸಂಚರಿಸುತ್ತಿದ್ದ ರೈಲನ್ನು ನಿತ್ಯ ಓಡಾಟಕ್ಕೆ ಬದಲಾಯಿಸಿರುವುದು ಚೆನ್ನೈ ಕನ್ನಡಿಗರಿಗೆ ಹಾಗೆಯೇ ಮಲೆಯಾಳಿಗಳಿಗೂ ಲಾಭದಾಯಕ.
ಇನ್ನು ವಿಶ್ವದರ್ಜೆ ರೈಲು ನಿಲ್ದಾಣವನ್ನಾಗಿ ಬೆಂಗಳೂರು ಸಿಟಿ, ಬೈಯಪ್ಪನಹಳ್ಳಿ ಮತ್ತು ಮಂಗಳೂರು ನಿಲ್ದಾಣಗಳನ್ನು ಅಭಿವೃದ್ದಿಗೊಳಿಸುವ ಯೋಜನೆ ಎಷ್ಟರ ಮಟ್ಟಿಗೆ ಲಾಭದಾಯಕ ಮತ್ತು ಎಂದು ಕಾರ್ಯರೂಪಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು. ಎಂಟು ಹೊಸ ಮಾರ್ಗಗಳ ಸಮೀಕ್ಷೆ ಆಶಾದಾಯಕವೇ. ಅದರಲ್ಲೂ ಬೆಂಗಳೂರು ಮತ್ತು ದೆಹಲಿಯ ನಡುವಿನ ಓಡಾಟವನ್ನು ಸುಮಾರು 500 ಕಿಮೀಗಳಷ್ಟು ಕಡಿಮೆ ಮಾಡಬಹುದು ಎಂದು ಅಂದಾಜಿಸಲಾದ ನಾಂದೇಡ-ಬೀದರ ಮಾರ್ಗಕ್ಕೆ ಶೀಘ್ರ ಚಾಲನೆ ನೀಡಿದರೆ ಉಪಯೋಗವಾಗಬಹುದು.
ಎಂದಿನಂತೆ ಶಿವಮೊಗ್ಗ- ತಾಳಗುಪ್ಪ ಮತ್ತು ಶ್ರವಣಬೆಳಗೊಳ ಮಾರ್ಗವಾಗಿ ಹಾಸನ ಮತ್ತು ಬೆಂಗಳೂರು ನಡುವಿನ ಮಾರ್ಗಗಳ ಮುಕ್ತಾಯಕ್ಕೆ ಸಂದಿರುವ ಹಣವನ್ನು ನೋಡಿದರೆ ಅದು ಇನ್ನಷ್ಟು ವರ್ಷ ತೆವಳುತ್ತಾ ಸಾಗುವುದು ನಿಶ್ಚಯ. ಇದರಂತೆ ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೊಟ್ಟೂರು-ಹರಿಹರ, ಕಡೂರು-ಚಿಕ್ಕಮಗಳೂರು- ಸಕಲೇಶಪುರ, ಹುಬ್ಬಳ್ಳಿ-ಅಂಕೋಲಾ, ಬೆಂಗಳೂರು- ಸತ್ಯಮಂಗಲ ಮುಂತಾದ ಯೋಜನಗಳಿಗೆ ಅಷ್ಟಿಷ್ಟು ಹಣವನ್ನು ನೀಡಲಾಗಿದೆಯಾದರೂ ಇವು ಪೂರ್ಣಗೊಳ್ಳಲು ಹಲವಾರು ವರ್ಷಗಳೇ ಬೇಕಾಗಬಹುದು.
ಒಟ್ಟಿನಲ್ಲಿ ಸಂಪೂರ್ಣವಲ್ಲದಿದ್ದರೂ ತೃಪ್ತಿ ಪಡಿಸುವ ಯತ್ನವನ್ನು ಮಮತಾ ಬ್ಯಾನರ್ಜಿಯವರು ಮಾಡಿದ್ದಾರೆ. ಕನಿಷ್ಠ ಘೋಷಣೆ ಮಾಡಿರುವ ಯೋಜನೆಗಳು ಶೀಘ್ರ ಕಾರ್ಯರೂಪಕ್ಕೆ ಬಂದಲ್ಲಿ ಕರ್ನಾಟಕದ ಜನತೆಗೆ ಸಂತೋಷವಾದೀತು.
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು