ಐತಿಹಾಸಿಕ ಸುಗ್ಗಲಮ್ಮ ದೇವಸ್ಥಾನವನ್ನು ನೆಲಸಮಗೊಳಿಸಿದ ಪ್ರಕರಣವನ್ನು ಹಿಂದಕ್ಕೆ ಪಡೆದಿರುವ ಬಿಜೆಪಿ ಸರ್ಕಾರ ಮತ್ತೊಮ್ಮೆ ತನ್ನನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿಕೊಂಡಿದೆ. ಕೇವಲ ಇಕ್ಕಟ್ಟು ಎಂದು ಹೇಳುವುದಕ್ಕಿಂತ ನಾಚಿಕೆಗೇಡಿನ ಕಾರ್ಯ ಎಂದರೂ ತಪ್ಪಾಗಲಿಕ್ಕಿಲ್ಲ. ಕೇವಲ ಇದೊಂದೆ ಪ್ರಕರಣವಲ್ಲದೇ ರೆಡ್ಡಿ ಬ್ರದರ್ಸ್ ಮೇಲಿನ ಉಳಿದ 16 ಕೇಸುಗಳನ್ನೂ ಸಹ ವಾಪಸ್ ಪಡೆದಿರುವುದು ಭ್ರಷ್ಟರಿಗೆ ರಹದಾರಿ ಕಲ್ಪಿಸಿರುವುದರ ಜೊತೆಗೆ ಸರ್ಕಾರದ ಘನತೆಗೆ ಚ್ಯುತಿಯನ್ನು ಸಹ ತಂದಿದೆ.
ಮಾಡಿದ ತಪ್ಪುಗಳನ್ನು ತಿದ್ದಿಕೊಂಡು, ಮುಂದೆ ಅಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಾದದ್ದು ಸರ್ಕಾರದ ಕರ್ತವ್ಯವಾಗಬೇಕಾಗಿತ್ತು. ಹಿರಿಯರೂ, ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿ ಅನುಭವವನ್ನು ಹೊಂದಿರುವ ಯಡಿಯೂರಪ್ಪನವರೇ ಇಂತಹ ಅಕ್ರಮ ಕಾರ್ಯಗಳಿಗೆ ಇಂಬು ನೀಡುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇಷ್ಟು ವರ್ಷಗಳ ಕಾಲದ ತಮ್ಮ ಘನತೆ, ಗೌರವಗಳನ್ನೆಲ್ಲಾ ಮಣ್ಣುಪಾಲು ಮಾಡುವಂತೆ ಹಿರಿಯ ಪೋಲೀಸ್ ಅಧಿಕಾರಿಗಳು ನೀಡಿದ ಸಲಹೆಯನ್ನೂ ಗಣನೆಗೆ ತೆಗೆದುಕೊಳ್ಳದೇ ಯಡಿಯೂರಪ್ಪನವರು ನಿರ್ಧಾರ ತೆಗೆದುಕೊಂಡಿರುವುದು ಸರ್ಕಾರ ತಾನೇ ಕಪ್ಪು ಮಸಿ ಬಳಿದು ಕೊಂಡಂತಾಗಿದೆ.
ತಪ್ಪುಗಳ ಮೇಲೆ ತಪ್ಪು ಮಾಡುತ್ತಾ, ಸರ್ಕಾರದ ಮತ್ತು ಪಕ್ಷದ ಗೌರವದ ಬಗ್ಗೆ ಚಿಂತಿಸದೇ ಇರುವ ಮುಖ್ಯಮಂತ್ರಿಗಳ ಕಾರ್ಯ ಮಾತ್ರ ಜನರಲ್ಲಿ ಬೇಸರ ಮೂಡಿಸುತ್ತದೆ. ಮೊದಲೇ ಪಕ್ಷದೊಳಗಿನ ಬಂಡಾಯ ಚಟುವಟಿಕೆಗಳು ಪಕ್ಷದ ವರ್ಚಸ್ಸಿಗೆ ಹಾನಿಯನ್ನು ಉಂಟು ಮಾಡಿದೆ. ಪಕ್ಷಾಂತರಿಗಳಿಗೆ ಮನ್ನಣೆ ನೀಡಿರುವುದು ನೈಜ ಕಾರ್ಯಕರ್ತರಲ್ಲಿ ಬೇಸರವನ್ನು ಮೂಡಿಸಿದೆ. ರೆಡ್ಡಿಗಳೇ ಬಿಜೆಪಿಗೆ ಮುಖ್ಯವಾದರೆ, ಅವರ ಬೆಂಬಲಕ್ಕಾಗಿ ಏನನ್ನು ಮಾಡಲೂ ಸಿದ್ದವಾದರೆ, ನೀತಿ ತತ್ವಗಳಿಗೆ ಬೆಲೆಯೆಲ್ಲಿ ಬಂತು. ಪಕ್ಷದಲ್ಲಿ ಅತ್ಯಂತ ಹಿರಿಯರಾಗಿದ್ದುಕೊಂಡು, ವಿರೋಧ ಪಕ್ಷದಲ್ಲಿದ್ದಾಗ ಸತ್ಯ ಮತ್ತು ಪ್ರಾಮಾಣಿಕತೆಯ ಜಪವನ್ನು ಮಾಡುತ್ತಿದ್ದ ಯಡಿಯೂರಪ್ಪನರ ಪ್ರಾಮಾಣಿಕತನ ಈಗ ಎಲ್ಲಿಗೆ ಹೋಯಿತು? ತಾವೇ ಕಷ್ಟಪಟ್ಟು ಅಧಿಕಾರಕ್ಕೆ ತಂದ ಪಕ್ಷದ ಸಮಾಧಿಯನ್ನು ಕಟ್ಟಬೇಕೆಂಬ ಯೋಜನೆಯನ್ನು ಯಡಿಯೂರಪ್ಪನವರು ಹಾಕಿಕೊಂಡಿದ್ದಾರೋ ಏನು?
ಈ ಮೇಲಿನ ಮಾತು ಉತ್ಪ್ರೇಕ್ಷೆ ಎನಿಸಬಹುದು. ಆದರೆ ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದಾಗ, ಜನರು ತಮ್ಮ ಸರ್ಕಾರದ ಮೇಲೆ ಎಷ್ಟು ಆಶಾಭಾವನೆಯನ್ನು ಇಟ್ಟುಕೊಂಡಿರುತ್ತಾರೆಂಬ ಚಿಕ್ಕ ಕಲ್ಪನೆಯೂ ಯಡಿಯೂರಪ್ಪನವರಲ್ಲಿ ಇಲ್ಲವೇನೋ ಎಂದು ಅನುಮಾನ ಮೂಡಿಸುತ್ತಿದೆ. ಹಣವು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದಾಗ ಎಂತೆಂತಹ ದುಸ್ಥಿತಿಗಳಾಗುತ್ತದೆ ಎಂಬುದಕ್ಕೆ ಈ ಸರ್ಕಾರ ಜ್ವಲಂತ ಉದಾಹರಣೆ. ಇತ್ತೀಚಿನ ಬೆಳವಣಿಗೆಗಳಿಂದ ಕರ್ನಾಟಕದ ಜನತೆ ಬೇಸರಗೊಂಡು ಬಿಜೆಪಿಯ ಬಗ್ಗೆ ಮರು ಚಿಂತನೆ ನಡೆಸಿರುವುದಂತೂ ಸತ್ಯ. ಜೊತೆಗೆ ಹಿಂದೆ ಮುಂದೆ ಯೋಚಿಸದೇ ಯಡಿಯೂರಪ್ಪನವರ ಸರ್ಕಾರ ಮಾಡುತ್ತಿರುವ ಈ ಮೇಲಿನ ಕಾರ್ಯಗಳು ದೀರ್ಘಾವಧಿಗೆ ಪಕ್ಷದ ಮೇಲೆ ಗಾಢವಾದ ಪರಿಣಾಮವನ್ನು ಬೀರುವದಂತೂ ಸತ್ಯ.
ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಅಥವಾ ಜನತಾ ಪಕ್ಷಗಳಿಗೆ ಅಧಿಕಾರ ನೀಡುವ ಕರ್ನಾಟಕದಂತಹ ರಾಜ್ಯದಲ್ಲಿ ಮೂರನೇ ಪಕ್ಷವಾಗಿ ಅಧಿಕಾರ ಬಂದಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಬಹುಕಾಲದಿಂದ ಅಧಿಕಾರದಿಂದ ವಂಚಿತವಾಗಿದ್ದ ಬಿಜೆಪಿಯ ಸಾಮರ್ಥ್ಯವನ್ನು ಪರೀಕ್ಷಿಸಲು ಜನತೆ ಅಧಿಕಾರ ನೀಡಿದ್ದಾರೆ ಎಂಬುದನ್ನು ಬಿಜೆಪಿ ಅರ್ಥೈಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಪಾಸ್ ಆದರೆ ದೀರ್ಘಾವಧಿಗೆ ಪಕ್ಷವು ಅಧಿಕಾರದಲ್ಲುಳಿಯಲು ಸಹಾಯ ಮಾಡಬಹುದು, ಇಲ್ಲಿ ಬಿಜೆಪಿ ಫೇಲ್ ಆದರೆ ಕಾಂಗ್ರೆಸ್ ಅಥವಾ ಜೆಡಿಎಸ್‌ನತ್ತ ಜನರು ಒಲಿಯುವುದು ಚಿಟಿಕೆ ಹೊಡೆದಷ್ಟೇ ಸುಲಭ. ಹಣ, ಆಮಿಷ ಮತ್ತು ಲಾಲಸೆಗೆ ಕಟ್ಟು ಬಿದ್ದು ಅಧಿಕಾರ ನಡೆಸುತ್ತ, ಅಭಿವೃದ್ದಿ ಕಾರ್ಯವನ್ನು ಮೂಲೆಗುಂಪು ಮಾಡಿರುವ ಬಿಜೆಪಿ ಒಂದು ವರ್ಷದ ಬಳಿಕವೂ ಎಚ್ಚೆತ್ತುಕೊಳ್ಳದಿರುವುದು ವಿಷಾದದ ಸಂಗತಿ. ಇದೇ ಬೆಳವಣಿಗೆ ಮುಂದುವರಿದು ಮುಂದಿನ ಬಾರಿ ಅಧಿಕಾರ ಕಳೆದುಕೊಂಡಲ್ಲಿ ಯಡಿಯೂರಪ್ಪನವರು ಚಪ್ಪಡಿಯನ್ನು ತಮ್ಮ ಮೇಲೆ ಹಾಕಿಕೊಂಡಂತೆ. ಮುಂದೆ ಮತ್ತೆ ಅಧಿಕಾರ ಪಡೆಯಲು ಹೆಣಗಾಡಬೇಕಾಗುತ್ತದೆ.
ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಾ ಕಾಲಕಳೆಯುವ ಬದಲು, ಈಗಲೇ ತಿದ್ದಿಕೊಂಡು, ನೀತಿತತ್ವಗಳಿಗೆ ಬೆಲೆ ನೀಡಿ, ಗಣಿಧಣಿಗಳಿಗೆ ಬಗ್ಗದೇ ಅಭಿವೃದ್ದಿಯನ್ನೇ ಮೂಲಮಂತ್ರವಾಗಿಸಿ ಅಧಿಕಾರ ನಡೆಸುವ ಹೊಣೆಗಾರಿಕೆ ಯಡಿಯೂರಪ್ಪನವರ ಮೇಲಿದೆ. ಅದನ್ನು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ತರುತ್ತಾರೆ ಎಂದು ಕಾದು ನೋಡಬೇಕಷ್ಟೇ.
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು